ಚೀನದ ಮಹಾಗೋಡೆ

ಹಳದಿ ಸಮುದ್ರದಲ್ಲಿರುವ ಚೀಲೀ ಖಾರಿಯಿಂದ ಮಧ್ಯ ಏಷ್ಯದವರೆಗೆ-ಸುಮಾರು 24000 ಕಿ.ಮೀ. ದೂರ-ಹಬ್ಬಿದ ಬೃಹತ್ ರಕ್ಷಣಾ ಗೋಡೆ, ಮಾನವ ಇದುವರೆಗೂ ಕೈಗೊಂಡಿರುವ ನಿರ್ಮಾಣ ಕಾರ್ಯಗಳಲ್ಲಿ ಅತ್ಯಂತ ದೊಡ್ಡದು. ಚೀನೀ ಚಕ್ರವರ್ತಿ ಚಿನ್ ಷಿ ಹ್ವಾಂಗ್ ಕ್ರಿ.ಪೂ. 3ನೆಯ ಶತಮಾನದಲ್ಲಿ ಇದನ್ನು ನಿರ್ಮಿಸಿದ. ಅವನಿಗೂ ಹಿಂದೆಯೇ, ಕನಿಷ್ಠ 4ನೆಯ ಶತಮಾನದಿಂದಲೇ ಚೀನದ ದೊರೆಗಳು ರಕ್ಷಣೆಗಾಗಿ ಎಲ್ಲೆಗಳ ಬಳಿ ಗೋಡೆಗಳನ್ನು ನಿರ್ಮಿಸಿದ್ದರು. ಚಿನ್ ಇಂಥ ಹಲವಾರು ಗೋಡೆಗಳನ್ನು ಸೇರಿಸಿ ಮಹಾಗೋಡೆಯನ್ನು ನಿರ್ಮಿಸಿದ. ಉತ್ತರದ ಹೂಣರ ಆಕ್ರಮಣವನ್ನು ತಡೆಗಟ್ಟುವುದೇ ಇದರ ನಿರ್ಮಾಣದ ಉದ್ದೇಶ. ಮಣ್ಣು ಮತ್ತು ಕಲ್ಲುಗಳಿಂದ ಇದನ್ನು ನಿರ್ಮಿಸಲಾಗಿತ್ತು. ಇದರ ಪೂರ್ವಭಾಗಗಳು ಇಟ್ಟಿಗೆಯಿಂದ ನಿರ್ಮಿತವಾಗಿದ್ದುವು. ಅನಂತರದ ಶತಮಾನಗಳಲ್ಲಿ ಇದನ್ನು ಆಗಿಂದಾಗ್ಗೆ ಬದಲಾಯಿಸಲಾಗುತ್ತಿತ್ತು. 15 ಮತ್ತು 16ನೆಯ ಶತಮಾನಗಳಲ್ಲಿ ಇದರ ಆವರಣವನ್ನು ಹಿಂದಿನದಕ್ಕಿಂತ ಕಿರಿದನ್ನಾಗಿ ಮಾಡಿ ಕಟ್ಟಲಾಯಿತು. 4,000 ಎತ್ತರದ ಗುಡ್ಡಗಳ ಮೇಲೂ ಆಳವಾದ ಕಮರಿಗಳಿಗೆ ಅಡ್ಡವಾಗಿಯೂ ಘಟಸರ್ಪದ ಹಾಗೆ ಬಳಸಿ ಸಾಗುವ ಈ ಗೋಡೆಯ ಎತ್ತರ ಸುಮಾರು 30. ಇದು ಕೆಳಗೆ 25 ಮತ್ತು ಮೇಲೆ 15 ಅಗಲವಾಗಿದೆ. ಸೈನಿಕರ ಸಾಲು ಅನಾಯಾಸವಾಗಿ ಇದರ ಮೇಲೆ ಸಾಗಲು ಸಾಧ್ಯವಾಗುವಂತೆ ರಸ್ತೆಯನ್ನೂ ಪ್ರತಿ 750 ದೂರಕ್ಕೆ ಒಂದರಂತೆ 40 ಎತ್ತರದ 25,000 ಕಾವಲು ಗೋಪುರಗಳನ್ನೂ ಇವಲ್ಲದೆ 15,000 ಗೋಪುರಗಳನ್ನು ಬಹಿರ್ಭಾಗದಲ್ಲಿ 6 ಎತ್ತರದ ಕೋಟೆ ತೆನೆಗಳನ್ನೂ ನಿರ್ಮಿಸಲಾಗಿತ್ತು. ಗೋಡೆಯ ಹೊರಗಡೆ ಒಂದಾದ ಮೇಲೊಂದರಂತೆ ಮೂರು ಕಂದಕಗಳಿದ್ದುವು.

	ಗೋಡೆಯಲ್ಲಿ 30 ಕೋಟಿ ಸಲೆಗಜ ಕಲ್ಲು ಸೇರಿಸಲಾಗಿದೆಯೆಂದು ಹೇಳಲಾಗಿದೆ. ಬೇರಾವ ಕಾಲದ ಯಾವುದೇ ಕಟ್ಟಡಕ್ಕೂ ಇದಕ್ಕೆ ಬಳಸಿದಷ್ಟು ಸಾಮಾಗ್ರಿ ಬಳಸಿಲ್ಲ. ಸೈನ್ಯ ಸಾಗಾಣಿಕೆ, ಗಾಡಿಗಳ ಓಡಾಟ, ಕಾವಲು ಠಾಣ್ಯಗಳು, ಸೈನಿಕ ನೆಲೆ, ಅಪಾಯದ ವಿರುದ್ಧ ರಕ್ಷಣೆಗಾಗಿ ಕಂದಕಗಳು, ಉಪಗೋಡೆಗಳು, ಆಹಾರ ಮತ್ತು ಯುದ್ಧಸಾಮಗ್ರಿ ಕೋಠಿ ಮುಂತಾದ ಎಲ್ಲ ವ್ಯವಸ್ಥೆಗಳಿಂದಲೂ ಇದು ಕೂಡಿತ್ತು. 						(ಎಚ್.ಸಿ.ಕೆ.; ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ